ಶಾಂತೇಶ
	ಸು. 1561. ವೀರಶೈವ ಕವಿ. ತೋಂಟದ ಸಿದ್ಧೇಶ್ವರ ಪುರಾಣ ಎಂಬ ಗ್ರಂಥದ ಕರ್ತೃ. ಶಾಂತದೇಶಿಕ, ಶಾಂತೀಶ್ವರ ಎಂಬವು ಇವನಿಗಿದ್ದ ಇತರ ಹೆಸರುಗಳು. ಇವನು ತನ್ನ ಜೀವನಕ್ಕೆ ಸಂಬಂಧಿಸಿದ ಕೆಲವಿವರಗಳನ್ನು ತನ್ನ ಕಾವ್ಯದಲ್ಲಿ ಹೇಳಿಕೊಂಡಿದ್ದಾನೆ. ತುಮಕೂರು ಜಿಲ್ಲೆಯ ಗುಬ್ಬಿ ಈತನ ಜನ್ಮಸ್ಥಳ. ಭಾವಚಿಂತಾರತ್ನದ ಕರ್ತೃ ಗುಬ್ಬಿಯ ಮಲ್ಲಣಾರ್ಯ ಈತನ ತಂದೆ. ಗುರು ಗಣೇಶ್ವರ. ಶಿವಾಂಶ ಸಂಭೂತನಾದ ಸಿದ್ಧೇಶ್ವರನೆಂಬ ಯತಿ ಲೋಕಕ್ಕೆ ಷಟ್ಸ್ಥಲ ಸಿದ್ಧಾಂತವನ್ನು ನಿರೂಪಿಸಲು ಜನ್ಮತಾಳಿ ಶಿವಗಂಗೆಯ ಸಮೀಪದ ನಾಗಿಣೀನದಿ ತೀರದ ತೋಟದಲ್ಲಿ ಇದ್ದ. ತೋಟದಲ್ಲಿದ್ದುದರಿಂದ ಇವನಿಗೆ ತೋಂಟದ ಸಿದ್ಧೇಶ್ವರ ಎಂದು ಹೆಸರಾಯಿತು. ಈತ ತನ್ನ ಶಿಷ್ಯನಾದ ಚಂದ್ರಶೇಖರನೆಂಬವನಿಗೆ ಶಿವತತ್ತ್ವ ಸ್ವರೂಪವನ್ನು ವಿವರವಾಗಿ ಹೇಳಿದ. ಅದನ್ನು ಚಂದ್ರಶೇಖರ ತನಗೆ ಹೇಳಿದುದರಿಂದ ತಾನು ಈ ಸಿದ್ಧೇಶ್ವರ ಪುರಾಣವನ್ನು ಬರೆದುದಾಗಿ ಶಾಂತೇಶ ತನ್ನ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ. ಸಿದ್ಧೇಶ್ವರ ಪುರಾಣ ಭಾಮಿನೀ ಷಟ್ಪದಿಯಲ್ಲಿದೆ. ಇದರಲ್ಲಿ ಏಳು ಸಂಧಿಗಳು, ಒಂದು ಸಾವಿರ ಪದ್ಯಗಳು ಇವೆ. ಗ್ರಂಥದ ಆರಂಭದಲ್ಲಿ ಸಿದ್ಧೇಶ್ವರನ ಸ್ತುತಿ ಇದೆ. ಅನಂತರ ಶಿವ, ಪಾರ್ವತಿ, ಪ್ರಭುದೇವ, ಬಸವ, ಚೆನ್ನಬಸವ, ಷಣ್ಮುಖ, ವೀರಭದ್ರ ಮತ್ತು ಭೃಂಗಿಯನ್ನು ಕ್ರಮವಾಗಿ ಸ್ತುತಿಸಿದ್ದಾನೆ. ಪೂರ್ವಕವಿಗಳಲ್ಲಿ ಪಾಲ್ಕುರಿಕೆ ಸೋಮನಾಥನನ್ನು ಹೊಗಳಿದ್ದಾನೆ. ಭುವನಕೋಶ, ಧರ್ಮಾಧರ್ಮ ವಿಚಾರ, ರುದ್ರರ ಲೀಲೆ, ಶಿವಲೋಕ ಅಷ್ಟಾಂಗಗಳು, ಪಂಚವಿಂಶತಿ ಲೀಲೆ, ಷಟ್ಸ್ಥಲ ಕ್ರಮ ಇವೇ ಮೊದಲಾದ ವಿಷಯಗಳನ್ನು ಶೈವ ಸಿದ್ಧಾಂತದ ಪ್ರಕಾರ ನಿರೂಪಿಸಿದ್ದಾನೆ. ಶೈವ ಸಿದ್ಧಾಂತದ ಅಭ್ಯಾಸಕ್ಕೆ ಸಿದ್ಧೇಶ್ವರ ಪುರಾಣ ಬಹಳ ಉಪಯುಕ್ತವಾಗಿದೆ.	
	(ಎಸ್.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ